ಕಿರು ಚಿತ್ರಣ

 ಸಣ್ಣ ಪ್ರಮಾಣದಲ್ಲಿ ವರ್ಣಚಿತ್ರಗಳನ್ನು ನಿರೂಪಿಸುವ ಕಲೆಯೇ ಕಿರುಚಿತ್ರಣ (ಮೀನಿಯೇಚರ್ ಪೇಂಟಿಂಗ್). ಸಾಮಾನ್ಯವಾಗಿ ಕಿರುಚಿತ್ರಗಳಿಗೆ ವ್ಯಕ್ತಿಗಳೇ ವಸ್ತುಗಳಾಗಿರುವ ಕಾರಣದಿಂದ ಇದನ್ನು ವ್ಯಕ್ತಿಚಿತ್ರಣದ (ಪೋರ್ ಟ್ರೇಚರ್) ಒಂದು ಪ್ರಕಾರವೆಂದು ಭಾವಿಸುವುದುಂಟು. ಆದರೆ ಇದು ಸರಿಯಲ್ಲ. ಪ್ರಕೃತಿದೃಶ್ಯಗಳನ್ನು ಕಿರುಚಿತ್ರಣದಲ್ಲಿ ರೂಪಿಸುವ ಪದ್ಧತಿ ಪ್ರಾಚೀನ ಭಾರತ ಮತ್ತು ಜಪಾನುಗಳಲ್ಲಿ ರೂಢಿಯಲ್ಲಿತ್ತು. ಆದರೆ ಅಲಂಕರಣ ಪಟ್ಟಿಕೆಗಳ ಅಂಗವಾಗಿ ಆದರೂ ಸ್ವತಂತ್ರವಾಗಿ ಚಿತ್ರಿತವಾದ ವರ್ಣಚಿತ್ರಗಳೂ ಈ ಗುಂಪಿಗೆ ಸೇರಬಹುದಾಗಿವೆ. ಈ ಶೈಲಿಗೆ ಪೂರ್ವರಂಗವಾಗಿ ಪ್ರಾಚೀನ ಕಾಲದ ತಾಳಪತ್ರ ಗ್ರಂಥಗಳಲ್ಲಿ ಬಿಡಿಸುತ್ತಿದ್ದ ಚಿತ್ರಗಳಿದ್ದುವು; ಲೋಹಪದಕಗಳ ಮೇಲೆ, ನಾಣ್ಯಗಳ ಮೇಲೆ ಮೂಡಿಸುತ್ತಿದ್ದ ವ್ಯಕ್ತಿಚಿತ್ರಗಳಿದ್ದುವು. ಕುಷಾಣರ ಕಾಲದಲ್ಲೇ ಬುದ್ದ, ಶಿವ, ಸ್ಕಂಧ ಮುಂತಾದ ದೇವತೆಗಳ ಚಿತ್ರಗಳನ್ನು ಹೊತ್ತ ಸಣ್ಣ ನಾಣ್ಯಗಳು ಚಲಾವಣೆಯಲ್ಲಿದ್ದುವು. ಜೈನದ ಕಲ್ಪಸೂತ್ರಗಳಲ್ಲಿ ತೀರ್ಥಂಕರರ, ಜಿನರ, ಮುನಿಗಳ ಚಿತ್ರಗಳಲ್ಲದೆ ಹಲವಾರು ಪ್ರಸಂಗಗಳೂ ನಿರೂಪಿತವಾಗಿವೆ. ಪರ್ಶಿಯನ್ ಗ್ರಂಥಗಳನ್ನೂ ಕಿರುಚಿತ್ರಗಳನ್ನು ಬಿಡಿಸುವ ಪದ್ಧತಿಯಿದ್ದಿತು. ಹೀಗೆ ಪೂರ್ವಕಾಲದಲ್ಲಿ ಅಲಂಕರಣಕ್ಕಾಗಿ, ಉಲ್ಲೇಖಕ್ಕಾಗಿ ಮೂಡಿಸುತ್ತಿದ್ದ ಕಿರು ಚಿತ್ರಣಗಳು ಕಾಲಕ್ರಮದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುವು. ಪ್ರಾಚೀನ ಭಾರತದಲ್ಲಿ ಅಜಂತದಲ್ಲಿ ಕೆಲವು ಕಿರುಚಿತ್ರಣಗಳು ರಚಿತವಾಗಿವೆ. ಇವುಗಳಲ್ಲಿ ಪ್ರಾಣಿ, ವ್ಯಕ್ತಿ, ಪಕ್ಷಿ, ಪುಷ್ಪ, ಫಲಗಳನ್ನು ಚಿತ್ರಿಸಲಾಗಿದೆ. ಸಿಂಹಳದಲ್ಲೂ ಇಂಥ ಕೆಲವು ಚಿತ್ರಗಳು ರಚಿತವಾಗಿದ್ದರೂ ಅವುಗಳ ಕಾಲವನ್ನು ನಿರ್ದಿಷ್ಟವಾಗಿ ತಿಳಿಸಲಾಗುವುದಿಲ್ಲ. ಇವಲ್ಲದೆ ಭಾರತದ ಚಿತ್ರಕಲೆಯಲ್ಲಿ ಇಂಥ ಕಿರುಚಿತ್ರಣಗಳು ಅನೂಚಾನವಾಗಿ ನಡೆದುಬಂದಿದ್ದರೂ ಹಲವಾರು ಕಾರಣಗಳಿಂದ ಬಹಳಷ್ಟು ನಾಶವಾಗಿವೆ. 11 ನೆಯ ಶತಮಾನದಲ್ಲಿ ಬಂಗಾಳದ ಪಾಲವಂಶದ ರಾಜರ ಆಶ್ರಯದಲ್ಲಿ ರಚಿತವಾದ ತಾಳೆ ಗರಿಯ ಹಸ್ತಪ್ರತಿಗಳ ಮೇಲಿನ ಚಿತ್ರಗಳನ್ನು ಇಲ್ಲಿ ಹೆಸರಿಸಬಹುದು. 12 ರಿಂದ 14 ನೆಯ ಶತಕಗಳಲ್ಲಿ ಪಶ್ಚಿಮ ಭಾರತದಲ್ಲಿ ತಾಳೆಗರಿಗಳ ಹಸ್ತ ಪ್ರತಿಗಳ ಮೇಲೇ ಪುನಃ ತಲೆದೋರುತ್ತವೆ. 15 ನೆಯ ಶತಕದಲ್ಲಿ ತಾಳೆ ಗರಿಯ ಬದಲು ಅದರ ಆಕಾರದಲ್ಲಿ ಕತ್ತರಿಸಿದ ಕಾಗದದ ಮೇಲೆ ಈ ಚಿತ್ರಣಗಳು ರಚಿತವಾಗುತ್ತಿದ್ದು, ಕಾಲ ಕ್ರಮದಲ್ಲಿ ರಜಪೂತ ಚಿತ್ರಕಲೆಗೆ ಕಾರಣವಾದುವು. 16-17ನೆಯ ಶತಮಾನಗಳಲ್ಲಿ ರಾಜಾಸ್ತಾನ, ಬಂದೇಲಖಂಡ, ಪಂಜಾಬ್, ಹಿಮಾಲಯ ಮತ್ತು ಕಾಶ್ಮೀರಗಳಲ್ಲಿ ವಿಶೇಷವಾಗಿದ್ದ ಭಾಗವತ ಮತ್ತಿತರ ಪುರಾಣದೃಶ್ಯಗಳ ಚಿತ್ರಗಳಲ್ಲಿ ಕಿರುಚಿತ್ರಣಗಳೂ ಹೆಚ್ಚು ಸಂಖ್ಯೆಯಲ್ಲಿವೆ.

 ಹದಿನೈದನೆಯ ಶತಮಾನದಲ್ಲಿ ಸಾದಿಯ ಬುಸ್ತನ್ ಎಂಬ ಪರ್ಶಿಯನ್ ಗ್ರಂಥದ ಪ್ರತಿಯೊಂದರಲ್ಲಿ ಹೆರಾತ್ ಶಾಖೆಗೆ ಸಂಬಂಧಿಸಿದ ಕಿರುಚಿತ್ರಗಳಿವೆ. ಇಬ್ಬರು ಸಂತರು ಸಂಧಿಸುವ ದೃಶ್ಯವನ್ನು ಸ್ವಾರಸ್ಯವಾಗಿ ನಿರೂಪಿಸುರವ ಚಿತ್ರವೊಂದು ಪ್ರಸಿದ್ಧವಾಗಿದೆ. ಕಿರುಚಿತ್ರಗಳ ಸಂಪ್ರದಾಯ ಪರ್ಶಿಯ ದೇಶದಲ್ಲಿ ಮೊದಲಿಗೆ ಅವತರಿಸಿ ಕಾಲಕ್ರಮದಲ್ಲಿ ಭಾರತಕ್ಕೆ ಬಂದಿತು ಎಂಬ ವಾದವಿದೆ. ಜೈನರ ತಾಳಕಾಚಾರ್ಯ ತಾಳಗ್ರಂಥದಲ್ಲಿ ಈ ಸಂಪ್ರದಾಯ ಆರಂಭವಾಯಿತೆಂದರೆ ಉತ್ಪ್ರೇಕ್ಷೆಯಲ್ಲ. ಮೊಗಲ್ ಕಾಲದ ಕಿರುಚಿತ್ರಗಳು ಜಗತ್ಪ್ರಸಿದ್ಧವಾಗಿವೆ. ರಾಜರ, ಅಧಿಕಾರಿಗಳ, ಶ್ರೀಮಂತರ ನೈಜಮೂರ್ತಿಗಳನ್ನು ಸೊಗಸಾದ, ಸೂಕ್ಷ್ಮವಾದ ವರ್ಣವಿನ್ಯಾಸದಲ್ಲಿ ನಿರ್ಮಿಸಿದ ಸಾವಿರಾರು ನಿದರ್ಶನಗಳು ಇಂದಿಗೂ ಉಳಿದಿವೆ. ಇದು ರಾಜಪುತ್ರರ ಆಸ್ಥಾನಗಳಲ್ಲಿ (ಜಯಪುರ, ಉದಯಪುರ, ಗ್ವಾಲಿಯರ್), ತಂಜಾವೂರು ನಾಯಕರ ಆಶ್ರಯದಲ್ಲಿ, ಮೊಗಲ್ ಸಾಮಂತರ ಸನ್ನಿಧಿಗಳಲ್ಲಿ ವಿಶೇಷವಾಗಿ ಬೆಳೆಯಿತು. ಹದಿನಾರನೆಯ ಶತಮಾನದಲ್ಲಿ ಸಿದ್ಧವಾದ ಗೀತ ಗೋವಿಂದ, ಭಾಗವತಪುರಾಣ ಮುಂತಾದ ಗ್ರಂಥಗಳಲ್ಲಿಯೂ ಕಿರುಚಿತ್ರಗಳನ್ನು ಮೂಡಿಸುವ ಪದ್ಧತಿ ಬಂದಿತು. ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಸಿದ್ಧವಾದ ನೂರಾರು ಕಿರುವ್ಯಕ್ತಿ ಚಿತ್ರಗಳು ಮೈಸೂರಿನ ಜಗನ್ಮೋಹನ ಪ್ರಾಸಾದದಲ್ಲಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಯದುರಾಜರ ಸಂತತಿಯನ್ನು ಸಿರೂಪಿಸುವ ವಂಶಾಂಬುಜವೆಂಬ ವಂಶವೃಕ್ಷವನ್ನು ಬರೆಸಿ ಅದರಲ್ಲಿ ತಮ್ಮ ಪೂರ್ವಜರ ಚಿತ್ರಗಳನ್ನೆಲ್ಲ ಅಳವಡಿಸಿದ್ದಾರೆ.

 ಹೊರದೇಶಗಳಲ್ಲಿ ಶ್ರೀಮಂತರು ತಮಗೆ ತುಂಬ ಬೇಕಾದವರ ವ್ಯಕ್ತಿ ಚಿತ್ರಗಳನ್ನು ಬರೆಸಿ ಅವನ್ನು ತಮ್ಮ ಕೊರಳಿನಲ್ಲಿ ಪದಕಗಳಂತೆ ಧರಿಸುವ ಸಂಪ್ರದಾಯವಿದ್ದಿತು. ಲಾಕೆಟುಗಳು, ಮೆಡಲ್‍ಗಳು, ಪಾಕ್‍ಗಳು, ಇವುಗಳಿಗೆ ಅಡಕವಾಗಿ ಕಿರುಚಿತ್ರಗಳು ಕಾಣಿಸಿಕೊಂಡವು. ವರ್ತುಲಾಕಾರದ ಕಿರುಚಿತ್ರಗಳ ಶೈಲಿ ಹೀಗೆ ಮೊದಲಾಯಿತು. ಬ್ರಿಟನಿನಲ್ಲಿ ಈ ಶೈಲಿಗೆ ವಿಶೇಷವಾದ ಪುರಸ್ಕಾರ ದೊರೆಯಿತು. ಇಲ್ಲಿ ಜರ್ಮನ್-ಸ್ವಿಸ್ ಜನಾಂಗದವನಾದ ಹಾನ್ಸ್ ಹೋಲ್ಬೆನ್ ಕಿ ಎಂಬಾತ ಸೃಷ್ಟಿಸಿರುವ ಕಿರುಚಿತ್ರಗಳು ಜಗತ್ತಿನ ಕಲಾಕೃತಿಗಳಲ್ಲೇ ಶ್ರೇಷ್ಠವೆಂದು ಪರಿಗಣಿತವಾಗಿವೆ. ಹದಿನಾರನೆಯ ಶತಮಾನದಲ್ಲಿದ್ದ ಬ್ರಿಟಿಷ್ ಜನಾಂಗದ ನಿಕೊಲಸ್ ಹಿಲಿಯರ್ಡ್ (1547-1619) ಕೂಡ ಉತ್ತಮ ಮೂರನೆಯ ವಯಸ್ಸಿನಲ್ಲೇ ಈ ಕಲೆಯನ್ನು ಕೈವಶಮಾಡಿಕೊಂಡ ಈತ ಹಲವು ಶೈಲಿಗಳನ್ನು ಸೇರಿಸಿ ರಮ್ಯವಾದ ಅಲಂಕರಣಗಳಿಂದ ಕೂಡಿದ ಸಹಜವ್ಯಕ್ತಿ ಚಿತ್ರಗಳನ್ನು ಕಿರುಪ್ರಮಾಣದಲ್ಲಿ ಬಿಡಿಸಿದ್ದಾನೆ. ಎಲಿಜಿóಬೆತ್‍ರಾಣಿಯದೇ ಒಂದು ಕಿರಿಚಿತ್ರವಿದೆ. ಹಿಲಿಯರ್ಡನ ಶಿಷ್ಯ ಒಲಿವರ್ ಕೂಡ ಉತ್ತಮ ಕಿರುಚಿತ್ರಕಾರ. ಮುಂದಿನ ತಲೆಮಾರಿನಲ್ಲಿ ಸ್ಯಾಮ್ಯುಅಲ್ ಕೂಪರ್ ಈ ಕಲೆಯನ್ನು ತುಂಬ ಜನಪ್ರಿಯವನ್ನಾಗಿ ಮಾಡಿದ. ಹೀಗೆ ಉಜ್ವಲವಾಗಿ ಬೆಳೆದ ಕಲೆ ಸರ್ ವಿಲಿಯಂರಾಸ್ (1794-1860) ಎಂಬ ಕಲಾವಿದನ ಕಾಲದವರೆಗೂ ನಿಂತು. ಅನಂತರ ಕಳೆಗುಂದಿತು. ಛಾಯಾಚಿತ್ರದ ಉಗಮದಿಂದ ಕಿರುಚಿತ್ರಗಳಿಗೆ ಪ್ರಾಶಸ್ತ್ಯ ತಪ್ಪಿತು.

 ಕಿರುಚಿತ್ರಗಳನ್ನು ದಂತದ ಹಲಗೆಗಳ ಮೇಲೆ ಮೂಡಿಸುವುದು ಕಷ್ಟಸಾಧ್ಯವಾದ ಕಲೆ. ನುಣುಪಾದ ಮೈಮೇಲೆ ವರ್ಣಗಳು ನಿಲ್ಲುವುದಿಲ್ಲ; ನೀರಿನಲ್ಲಿ ಕಲೆಸಿದ ಬಣ್ಣಗಳು ಉಳಿಯುವಂತೆ ಮಾಡಲು ವಿಶೇಷವಾದ ವಿಧಾನವನ್ನು ಮೊಗಲ್ ಕಲಾವಿದರು ಕಂಡುಹಿಡಿದು ಪ್ರಯೋಗ ಮಾಡಿದರು. ಇವರಿಂದಾಗಿ ದಂತ ಕಿರುಚಿತ್ರಗಳು ಹೆಚ್ಚು ಪ್ರಚಲಿತವಾದುವು. ಪ್ರಾಶ್ವಾತ್ಯದೇಶದಲ್ಲಿ ಹದಿನೆಂಟನೆಯ ಶತಮಾನದ ಸುಮಾರಿಗೆ ಈ ಕಲೆಗೆ ಪುರಸ್ಕಾರ ದೊರೆಯಿತು. ಇಟಲಿದೇಶದ ಮಹಿಳೆ ರೋಸಲ್ಬಾ ಕೆರೀರಾ (1675-1757) ಈ ಕ್ಷೇತ್ರದಲ್ಲಿ ತುಂಬ ದುಡಿದಳು. ಹದಿನೆಂಟನೆಯ ಶತಮಾನದ ಪರಾರ್ಧದಲ್ಲಿ ಬ್ರಿಟನ್ ದೇಶದ ಉತ್ತಮ ಕಲೆಗಾರರಾಗಿದ್ದ ಜಾನ್ ಸ್ಮಾರ್ಟ್(1741-1811), ಜಾರ್ಜ್ ಎಂಗಲ್‍ಹಾರ್ಟ್(1750-1829), ರಿಚರ್ಡ್ ಕೊಸ್ವೆ (1742-1821) ಮುಂತಾದವರು ಈ ದಂತಕಿರುಚಿತ್ರಕಲೆಯನ್ನು ನಿರ್ಮಿಸಿದ. ಭಾರತದಲ್ಲಿ ಬಹುಕಾಲದಿಂದ ಪ್ರಣಷ್ಟವಾಗಿದ್ದ ಈ ಕಲೆಯನ್ನು ಅಭ್ಯಾಸಮಾಡಿ ಸಿದ್ಧಿಸಿಕೊಂಡವರೆಂದರೆ ಕೆ. ವೆಂಕಟಪ್ಪ. ಇವರು ದಂತದ ಸಣ್ಣಹಲಗೆಗಳ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ತಮ್ಮ ಗುರು ಅವನೀಂದ್ರನಾಥಠಾಕೂರರ ಚಿತ್ರಗಳನ್ನು ಅತ್ಯಂತ ಸುಂದರವಾಗಿ, ಅದ್ಭುತವರ್ಣ ವಿನ್ಯಾಸದಲ್ಲಿ ಬಿಡಿಸಿದ್ದಾರೆ.

 ಪ್ರಾಚೀನಕಾಲದ ಸಂಸ್ಕøತಿಗಳಿಗೆ ಸೇರಿದ ಮಣ್ಣಿನ ಕಲಶಗಳ ಮೇಲೆ ಅನೇಕ ದೇಶಗಳವರು ಕಿರುಚಿತ್ರಗಳನ್ನು ಮೂಡಿಸುತ್ತಿದ್ದರು. ಭಾರತದ ಪ್ರಾಚೀನ ಸಂಸ್ಕøತಿಗಳಿಗೆ ಸೇರಿದ ಮಣ್ಣುಪಾತ್ರೆಗಳ ಮೇಲೆ ಇಂಥ ವರ್ಣಚಿತ್ರ ಅನೇಕವಾಗಿವೆ. ಮಧ್ಯಯುಗದಲ್ಲಿ ಚೀನ, ಜಪಾನ್‍ಗಳಲ್ಲಿ ಕುಡಿಯುವ ಬಟ್ಟಲುಗಳ ಮೇಲೆ, ಬಡಿಸುವ ತಟ್ಟೆಗಳ ಮೇಲೆ, ಹೂವಿಡುವ ಕೂಜಗಳ ಮೇಲೆ ಚಿತ್ರಗಳನ್ನು ಬಿಡಿಸುವ ಕಲೆಯನ್ನು ಮುಗಿಲು ಮುಟ್ಟಿಸಿದರು. ಇದಕ್ಕಾಗಿಯೇ ಮಣ್ಣನ್ನು ಹದಮಾಡಿಕೊಳ್ಳುತ್ತಿದ್ದರು. ಈಗ ಚೈನಾಮಣ್ಣು ಎಂದು ಪ್ರಖ್ಯಾತವಾಗಿರುವ ಪದಾರ್ಥದ ಮೇಲೆ ಚಿತ್ರಗಳನ್ನು ಬಿಡಿಸದಿದ್ದರೆ ಅದೊಂದು ನ್ಯೂನತೆಯೆನ್ನುವಷ್ಟು ಈ ಮಣ್ಣಿಗೂ ಚಿತ್ರಣಕ್ಕೂ ಬಾಂಧವ್ಯ ಬೆಳೆಯಿತು. ಹದಿನೇಳನೆಯ ಶತಮಾನದಿಂದಾಚೆ ಲೋಹಗಳ ಮೇಲೂ ಕಿರು ಚಿತ್ರಗಳನ್ನು ಮೂಡಿಸುವ ಶೈಲಿ ಆರಂಭವಾಯಿತು. ಎನ್ಯಾಮಲ್ ಕಿರುಚಿತ್ರಗಳು ಪ್ರಚಲಿತವಾದವು. ಫ್ರೆಂಚ್ ಕಲಾವಿದ ಜೆ. ಪಿಟಿಟೊ (1607-1691) ಮತ್ತು ಜರ್ಮನ್ ದೇಶೀಯನಾದ ಸಿ.ಎಫ್. ಸಿಂಕೆ (1683-1767) ಇವರು ವಿಶ್ವವಿಖ್ಯಾತರಾದ ಎನ್ಯಾಮಲ್ ಕಿರುಚಿತ್ರಗಾರರು.

 1770ರಿಂದ 1840ರ ವರೆಗೆ ಐರೋಪ್ಯ ದೇಶಗಳಲ್ಲಿ ಕಿರುಪ್ರಮಾಣದ ಛಾಯಾಚಿತ್ರಗಳೂ (ಮೀನಿಯೇಚರ್ ಸಿಲ್ಹೂಟ್ಸ್) ತುಂಬ ಜನಪ್ರಿಯವಾಗಿದ್ದವು. ಇವನ್ನು ಬಡವರ ಕಿರುಚಿತ್ರಗಳೆಂದು ಬಣ್ಣಿಸುತ್ತಿದ್ದರು. ಕಾರಣವೇನೆಂದರೆ ಬಲು ಬೇಗ, ಕಡಿಮೆಬೆಲೆಯಲ್ಲಿ ಬೀದಿಯಲ್ಲೇ ಕಲಾವಿದರು ಈ ಚಿತ್ರಗಳನ್ನು ಬಿಡಿಸಿಕೊಡುತ್ತಿದ್ದರು. ಫ್ರೆಂಚ್ ಸರ್ಕಾರದ ಆರ್ಥಿಕ ಮಂತ್ರಿಯಾಗಿದ್ದ ಡೀ ಸಿಲ್ಹೂಟ್ಸ್ ತುಂಬ ಜಿಪುಣನಾಗಿದ್ದು ಇಂಥ ಚಿತ್ರಗಳನ್ನೇ ಮನೆ ತುಂಬ ಅಲಂಕಾರಕ್ಕಾಗಿ ಇಟ್ಟಿದ್ದುದರಿಂದ ಈ ಚಿತ್ರ ಶೈಲಿಗೆ ಅವನ ಹೆಸರೇ ಬಂದಿತು. ಹತ್ತೊಂಬತ್ತನೆಯ ಶತಮಾನದ ಆಗಸ್ಟಿನ್ ಎಡ್ವುಆರ್ಟ್ ಈ ಛಾಯಾ ಕಿರುಚಿತ್ರ ಕ್ಷೇತ್ರದಲ್ಲಿ ದೊಡ್ಡ ಕಲೆಗಾರನಾಗಿದ್ದ. ಪೋಟೋಗ್ರಫಿ ಬಳಕೆಗೆ ಬಂದಾಗ ಈ ಛಾಯಾಚಿತ್ರಗಳು ಹಿಂದುಳಿದವು.

 ವ್ಯಕ್ತಿಯನ್ನು ಕಲೆಯಲ್ಲಿ ಸ್ಥಿರಗೊಳಿಸಲು ಕಿರುಚಿತ್ರಗಳನ್ನು ಬರೆಯುವರೆಂದ ಮೇಲೆ, ವ್ಯಕ್ತಿನಿರ್ದೇಶಕ್ಕಿಂತ ಹಿನ್ನೆಲೆಯಲ್ಲಿರುವ ಮನೋಧರ್ಮ ಪ್ರಮುಖವಾಗುತ್ತದೆ. ವ್ಯಕ್ತಿಯ ಬಾಹ್ಯ ಸ್ವರೂಪವೇ ಮುಖ್ಯವೆಂದು ನಮ್ಮವರು ಎಣಿಸಲಿಲ್ಲ. ಚಿತ್ರಣದಲ್ಲಿ ಮೂಡಿ ಬರಬೇಕಾದುದು ಆ ವ್ಯಕ್ತಿಯ ಸ್ವಭಾವ, ಸಂಕೇತ, ಪಾತ್ರ. ನಿದರ್ಶನಕ್ಕೆ ಜೈನರ ಗ್ರಂಥವಾದ ಕಲ್ಪಸೂತ್ರದ ಪ್ರತಿಗಳಲ್ಲಿ ಹಲವಾರು ಜೈನಮುನಿಗಳ, ಸಾಧುಗಳ ಕಿರುಚಿತ್ರಗಳಿವೆ, ರಾಜರ ಚಿತ್ರಣಗಳೂ ಇವೆ. ಸ್ಥೂಲ ವಿವರಗಳಲ್ಲಿ ಎಲ್ಲ ಮುನಿಗಳೂ ಒಂದೇ ತೆರನಾಗಿದ್ದಾರೆ, ಎಲ್ಲ ರಾಜರೂ ಒಂದೇ ತೆರನಾಗಿದ್ದಾರೆ. ಮುಖದ ಮಾಟ. ಮೈಯ ರೇಖೆಯಿಂದ ವ್ಯಕ್ತಿಯನ್ನು ನಿರೂಪಿಸುವ ಸಂಕಲ್ಪ ಇಲ್ಲಿ ಇಲ್ಲ; ಸಂದರ್ಭವನ್ನು ಅರಿತು ಅದರ ಬಲದಿಂದ ಆಯಾಯಾ ವ್ಯಕ್ತಿಗಳನ್ನು ನಿರ್ದೇಶಿಸಬೇಕೆಂಬ ಆಗ್ರಹ ಇಲ್ಲಿ ಕಾಣುತ್ತದೆ. ಕಿರುಚಿತ್ರಣ ಸಹಜಪ್ರತಿಕೃತಿಗಳಾಗಿರಬೇಕೆಂಬ ದೃಷ್ಟಿ ಅರ್ವಾಚೀನವಾದುದು. ಈಗ ಕಿರುಚಿತ್ರವೆಂದರೆ ಯಥಾರ್ಥವಾದ ಸ್ವರೂಪ ನಿರೂಪಣೆಯೆಂದೇ ಅರ್ಥ. ಇದೇ ಕಾರಣದಿಂದ ಛಾಯಾಚಿತ್ರ ಕಲೆಯಾಗಿ ಪ್ರಬುದ್ಧವಾದೊಡನೆ ಕಿರುಚಿತ್ರಗಳ ಪ್ರಚಾರ ಕುಗ್ಗಿತು.

 ಪರ್ಶಿಯನ್ ಗ್ರಂಥಗಳಲ್ಲಿ ವ್ಯಕ್ತಿಚಿತ್ರಣದ ಹವ್ಯಾಸವಿಲ್ಲದಿದ್ದುದರಿಂದ ಅಕ್ಷರ ವಿನ್ಯಾಸದೊಂದಿಗೆ (ಕ್ಯಾಲಿಗ್ರಫಿ) ಲತಾವಿನ್ಯಾಸ, ಪುಷ್ಪವಿನ್ಯಾಸಗಳನ್ನೂ ಮೂಡಿಸುತ್ತಿದ್ದರು. ಇಂಥ ಅಲಂಕರಣಗಳಲ್ಲಿ ಕೂಡ ಪ್ರಕೃತಿ ಸಹಜವಾಗಿರಬೇಕೆಂಬ ನಿಷ್ಠೆ ಕಾಣಿಸುವುದಿಲ್ಲ. ಇಲ್ಲಿ ಕಲ್ಪನಾತಂತ್ರದ ವಿನ್ಯಾಸಗಳೇ ಹೆಚ್ಚು, ಸೂಕ್ಷ್ಮ ಪರಿಧಿಯೊಳಗೆ ವ್ಯಕ್ತಿಯನ್ನೋ ಸಂದರ್ಭವನ್ನೋ ನಿರೂಪಿಸುವುದು ಸುಲಭ ಸಾಧ್ಯವಲ್ಲ. ರೇಖೆಗಳಲ್ಲಿಯೇ ಸ್ವಭಾವವನ್ನು ನಿರ್ದೇಶಿಸುವುದು ಕಷ್ಟ. ವಿವರಗಳನ್ನು ನೈಜವಾಗಿ ಬಿಡಿಸಬೇಕೆಂದರೆ ಅವಕಾಶವಿರಬೇಕು. ಈ ಎಲ್ಲ ಕಾರಣಗಳಿಂದಾಗಿ ಕಿರುಚಿತ್ರಗಳಲ್ಲಿ ಘನದೃಷ್ಟಿಯಿರದೆ ಸಂಕೇತ ಪ್ರಮುಖವಾದ ದೃಷ್ಟಿ ಕಾಣಬರುತ್ತದೆ. ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಟಿಬೆಟನ್ ಗ್ರಂಥಗಳಲ್ಲಿ ಮತ್ತು ಸ್ಕ್ರೋಲ್ ಚಿತ್ರಗಳಲ್ಲಿ ಪ್ರತೀತ್ಯ ಸಮುತ್ಪಾದತತ್ತ್ವದ ವಿವಿಧ ಪ್ರಕಾರಗಳನ್ನು ಚಿತ್ರಿಸಿರುವ ಬಗೆ. ಅವರ ಮತ್ತು ಚೀನದೇಶದ ಮಂಡಲ ನಿರೂಪಣೆಗಳಲ್ಲಿಯೂ ಕಿರುಚಿತ್ರಗಳು ಇವೆ.

 

(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ